	`ಲೋಕಾಯತ'ವು ಪ್ರಾಚೀನ ಭಾರತದ ಭೌತವಾದಿ ತತ್ತ್ವಶಾಸ್ತ್ರ ಪದ್ಧತಿಗಳಲ್ಲೊಂದು. ಹೆಸರೇ ಸೂಚಿಸುವಂತೆ ಅದೊಂದು ಸಾಮಾನ್ಯ ಜನಸಮುದಾಯದ ತತ್ತ್ವಶಾಸ್ತ್ರವಾಗಿದ್ದಿತು. ಇದಕ್ಕೆ ಸಂಬಂಧಿಸಿ ಆರಂಭಿಕ ಉಲ್ಲೇಖಗಳನ್ನು ಬೌದ್ಧಮತದ ಅಧಿಕೃತ ಪಠ್ಯಗಳಲ್ಲೂ, ವೇದಗಳಲ್ಲೂ ಮತ್ತು ಪ್ರಾಚೀನ ಭಾರತದ ಮಹಾಕಾವ್ಯಗಳಲ್ಲೂ ಕಾಣಬಹುದು. ಈ ತತ್ತ್ವಶಾಸ್ತ್ರದ ಮೂಲಗ್ರಂಥಗಳಾವುವೂ ಲಭ್ಯವಿಲ್ಲ. ಅವನ್ನೆಲ್ಲ ಈ ವಿಚಾರಪದ್ಧತಿಯ ವಿರೋಧಿಗಳು ಆ ಕಾಲದಲ್ಲೇ ಸುಟ್ಟು ನಾಶಮಾಡಿದರು. ಹಾಗಾಗಿ ಅದರ ಬಗೆಗೆ ಮಾಹಿತಿಗಳನ್ನು ಅದಕ್ಕೆ ಉಲ್ಲೇಖಗಳಿರುವ ಇತರ ಮೂಲಗಳಿಂದಷ್ಟೆ ಪಡೆಯಲು ಸಾಧ್ಯ. 

	ಈ ವಿಚಾರಪದ್ಧತಿಯ ಸಂಸ್ಥಾಪಕ ಹಾಗೂ ಅದರ ಮೂಲ ಸೂತ್ರಗಳ ಆದ್ಯಕರ್ತೃ ಬೃಹಸ್ಪತಿ (ಕ್ರಿ. ಪೂ. ಸುಮಾರು 7-6ನೇ ಶತಮಾನ) ಎಂದೂ ಈ ವಿಚಾರಧಾರೆಗೆ ಸುಸ್ಪಷ್ಟ ರೂಪ ಕೊಟ್ಟವನು ಚಾರ್ವಾಕನೆಂದೂ ಹೇಳಲಾಗುತ್ತದೆ. ಆದರೆ ಈ ಹೆಸರುಗಳೆಲ್ಲ ಕೇವಲ ಕಾಲ್ಪನಿಕ. ಆದರೆ ಆ ಕಾಲದಲ್ಲಿ ಲೋಕಾಯತದ ತಾತ್ತ್ವಿಕ ವಿಚಾರಗಳು ಜನಸಾಮಾನ್ಯರ ಮಧ್ಯೆ ತುಂಬ ಪ್ರಾಬಲ್ಯ ಗಳಿಸಿದ್ದವೆಂಬುದಂತೂ ನಿರ್ವಿವಾದದ ಸಂಗತಿ. ಕೌಟಿಲ್ಯನ ಅರ್ಥಶಾಸ್ತ್ರದಲ್ಲೂ ಇತರ ವೈದಿಕ ಹಾಗೂ ದಾರ್ಶನಿಕ ಕೃತಿಗಳಲ್ಲೂ ಈ ವಿಚಾರಧಾರೆಯನ್ನು ಪ್ರಖರವಾಗಿ ವಿರೋಧಿಸಿರುವುದೇ ಅದು ಎಷ್ಟು ಜನಪ್ರಿಯವಾಗಿದ್ದಿತು ಹಾಗೂ ಪ್ರಭಾವಶಾಲಿಯಾಗಿದ್ದಿತು ಎಂಬುದಕ್ಕೆ ನಿಚ್ಚಳ ಪುರಾವೆ ಒದಗಿಸುತ್ತದೆ.

	ಲೋಕಾಯತ ಬೋಧೆಯ ಪ್ರಕಾರ ಈ ಜಗತ್ತು ಇದರಲ್ಲಿನ ಎಲ್ಲ ವಸ್ತು ವಿಶೇಷಗಳೂ (ಪಶು, ಪಕ್ಷಿ, ಪ್ರಾಣಿ ಹಾಗೂ ಪುರುಷರೂ ಇದಕ್ಕೆ ಹೊರತಲ್ಲ) ಪ್ರಕೃತಿ ಸಹಜವಾಗಿ ತಮ್ಮ ಸ್ವಂತ ಗುಣಧರ್ಮಕ್ಕೆ ಅನುಗುಣವಾಗಿ ರೂಪುಗೊಂಡಂಥವು. ಅವು ಯಾವುದೇ ನಿಸರ್ಗಾತೀತ ಶಕ್ತಿಯೊಂದರ ದೇವರ ಸೃಷ್ಟಿಯಲ್ಲ. ಹೀಗೆ ಲೋಕಾಯತವು ದೇವರ ಅಸ್ತಿತ್ವವನ್ನು ನಿರಾಕರಿಸುತ್ತದೆ. ಪೃಥ್ವಿ(ನೆಲ), ಜಲ(ನೀರು), ತೇಜಸ್ಸು(ಬೆಂಕಿ) ಹಾಗೂ ವಾಯು(ಗಾಳಿ)-ಈ ನಾಲ್ಕು ಪ್ರಕೃತಿ ಧಾತುಗಳೇ ಅಸ್ತಿತ್ವದಲ್ಲಿರುವ ಎಲ್ಲಕ್ಕೂ ಮೂಲಾಧಾರ. ಜೀವನದ ಸಂಕೀರ್ಣ ರೂಪಗಳು ಸರಳ ರೂಪಗಳ ದೀರ್ಘಕಾಲಿಕ ವಿಕಸನದ ಫಲಗಳೇ ಆಗಿವೆ. ಮನಸ್ಸು ಅಥವಾ ಪ್ರಜ್ಞೆಯೂ ಯಾವುದೇ ಅತೀಂದ್ರಿಯ ವಸ್ತುವಲ್ಲ. ಅದು ಭೌತಿಕ ಧಾತುಗಳ ವಿಶೇಷ ಸಂಯೋಜನೆಯ ಪರಿಣಾಮವಷ್ಟೆ. ಇಂದ್ರಿಯಗಳ ಮೂಲಕ ನಾವು ಪಡೆಯುವ ತಿಳಿವಳಿಕೆಯಷ್ಟೆ ನಂಬಲರ್ಹವಾದುದು ಎಂದೇ ಈ ತತ್ತ್ವಪದ್ಧತಿಗೆ ವಸ್ತುವಾದ ಅಥವಾ ಭೌತವಾದ ಎಂಬ ಹೆಸರು ಬಂದಿರುವುದು.

	ಹೀಗೆ ದೈವತ್ವದ ಕಲ್ಪನೆಯಂತೆ ಆತ್ಮದ ಕಲ್ಪನೆಯನ್ನೂ ಲೋಕಾಯತ ನಿರಾಕರಿಸುತ್ತದೆ. ಶರೀರವಲ್ಲದೆ ಆತ್ಮ ಎಂಬ ಬೇರೊಂದು ಶಕ್ತಿ/ವಸ್ತು ಇಲ್ಲವೇ ಇಲ್ಲ ಎಂದದು ವಾದಿಸುತ್ತದೆ. ಆತ್ಮವು ಶರೀರ ಬಿಟ್ಟು ಬೇರೆಲ್ಲೂ ಇರಲಾಗದು. ಆತ್ಮ ಇಲ್ಲದ ಶರೀರ ಹೆಣವಷ್ಟೆ. ಅದು ಶರೀರದೊಂದಿಗೆ ಹುಟ್ಟುತ್ತದೆ, ಶರೀರದೊಂದಿಗೆ ನಶಿಸುತ್ತದೆ. ಹಾಗಾಗಿ ಆತ್ಮವೂ ಭೌತಿಕ ವಸ್ತುಗಳೆಂದಲೇ ಉದ್ಭವಿಸುತ್ತದೆ. `ಭೂತೇಭ್ಯಃ ಚೈತನ್ಯಂ' ಎಂಬುದು ಲೋಕಾಯತರ ಪ್ರಧಾನ ಸೂತ್ರ. ಶರೀರದಲ್ಲಿ ಆತ್ಮವು ಆರಂಭದಲ್ಲಿ ಇಲ್ಲದ್ದು ಹೊರಗಿನಿಂದಷ್ಟೆ ಬರಲು ಸಾಧ್ಯ ಅಲ್ಲವೇ, ಎಂಬ ವೇದಾಂತಿಗಳ ಪ್ರಶ್ನೆಗೆ ಉತ್ತರಿಸುತ್ತ ಲೋಕಾಯತರು ಹೇಳಿದರು: ಮದ್ಯ ತಯಾರಿಸುವ ಮೂಲ ಪದಾರ್ಥಗಳಲ್ಲಿ ಮಾದಕತೆ ಇರುವುದಿಲ್ಲ, ಆದರೆ ಅವುಗಳ ಮಿಶ್ರಣವನ್ನು ಕುದಿಸಿ ಬಟ್ಟಿ ಇಳಿಸಿದಾಗ ಅದರಲ್ಲಿ ಅಮಲು ಹುಟ್ಟಿಕೊಂಡಿರುತ್ತದೆ. ಹಾಗಾಗಿ ಮೂಲದಲ್ಲಿ ಇಲ್ಲದ್ದು ಕೊನೆಯಲ್ಲಿ ಅದರಿಂದಲೇ ಉದ್ಭವಿಸುವುದು ಸಾಧ್ಯವಿದೆ. ಜಡದೊಳಗೇ ಜೀವೋತ್ಪತ್ತಿ ಎಂದವರು ವಾದಸಿದರು.

	ಲೋಕಾಯತರ ವಿಚಾರಗಳ ಪ್ರಕಾರ ಮನುಷ್ಯ ಹುಟ್ಟುವುದು ಒಮ್ಮೆಯಷ್ಟೆ. ಪೂರ್ವಜನ್ಮ, ಪುನರ್‍ಜನ್ಮ ಎಂಬುವಿಲ್ಲ. ಕೇವಲ ಭ್ರಾಮಕ ಕಲ್ಪನೆಗಳು. ಹಾಗಾಗಿ ಲೋಕಾಯತವು ಪೂರ್ವಜನ್ಮದ ಕರ್ಮಫಲ, ಹಣೆಯ ಬರಹ, ವಿಧಿಸಂಕಲ್ಪ ಎಂಬಂಥ ಭಾವನೆಗಳನ್ನೆಲ್ಲ ಸಾರಸಗಟಾಗಿ ತಿರಸ್ಕರಿಸುತ್ತದೆ. ಜನ್ಮ-ಪುನರ್‍ಜನ್ಮಗಳಿಲ್ಲದ ಶಾಶ್ವತ ಮೋಕ್ಷ ಸಿದ್ಧಿಸಲೆಂದು, ಇಲ್ಲವೇ ಮುಂದಿನ ಜನ್ಮಗಳಲ್ಲಿ ಹಸನಾದ ಬಾಳುವೆ ಲಭಿಸಲೆಂದು ಹಾರೈಸುತ್ತ ಸಂಪ್ರದಾಯವಾದಿಗಳು ಈ ಜನ್ಮದಲ್ಲಿ ಉಪವಾಸ ವ್ರತ ಕೈಕೊಂಡು, ಮೈಗೆ ಬೂದಿ ಬಳಿದುಕೊಂಡು ವನವಾಸ-ತಪಶ್ಚರ್ಯೆ ಇತ್ಯಾದಿಗಳಂಥ ದೇಹದಂಡನ ಕ್ರಮಗಳಲ್ಲಿ ತೊಡಗುತ್ತಿದ್ದುದನ್ನು ಲೋಕಾಯತ ಸಿದ್ಧಾಂತವು ನಗೆಪಾಟಲು ಮಾಡಿತು. ಇರುವುದು ಒಂದೇ ಜನ್ಮ - ಇಂದಿನ ಜನ್ಮ. ಇದು ಇರುವಾಗ ಸುಖಸಂತಸಗಳಿಂದ ಬಾಳಬೇಕು, ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು, ದೇಹವಿದು ಭಸ್ಮವಾದ ಮೇಲೆ ಮತ್ತೆ ಹಿಂದಿರುಗಿ ಬರುವುದೆಂತು? ಎಂದದು ಬೋಧಿಸಿತು. ಅಂದರೆ ನೀತಿನಿಯಮಗಳಿಲ್ಲದ ಸ್ವಚ್ಛಂದ ಜೀವಕ್ಕೇನೂ ಅದು ಒತ್ತು ಕೊಡಲಿಲ್ಲ. ಸಂಪ್ರದಾಯವಾದಿಗಳು ಹಾಗೆಂದು ಲೋಕಾಯತ ಭಾವನೆಗಳನ್ನು ತಿರುಚಿ ಪ್ರಚಾರ ಮಾಡಿದರಷ್ಟೆ.

	ಲೋಕಾಯತ ತತ್ತ್ವಶಾಸ್ತ್ರವು ಮೂಢನಂಬಿಕೆಗಳನ್ನೆಲ್ಲ ಗೇಲಿ ಮಾಡಿತು. ಪ್ರತ್ಯಕ್ಷ ಪ್ರಮಾಣವನ್ನು ಬಿಟ್ಟು ಬೇರಾವ ಪ್ರಮಾಣವನ್ನೂ ಅದು ಒಪ್ಪಲಿಲ್ಲ. ಹೋಮ-ಹವನಗಳಲ್ಲಿ ಪ್ರಾಣಿಗಳನ್ನು ಬಲಿ ನೀಡುತ್ತಿದ್ದುದನ್ನು, ಅದರಿಂದ ಅವು ಸ್ವರ್ಗಕ್ಕೆ ಹೋಗುತ್ತಿದ್ದವೆಂದು ಸಂಪ್ರದಾಯವಾದಿಗಳು ಪ್ರತಿಪಾದಿಸುತ್ತಿದ್ದುದನ್ನು ವಿಡಂಬನೆಗೆ ಗುರಿ ಮಾಡುತ್ತ ಲೋಕಾಯತ ವಿಚಾರವಾದಿಗಳು ಅವರಿಗೆ ಹೇಳಿದರು; `ಹಾಗಾದರೆ ನಿಮ್ಮ ತಂದೆಯನ್ನೇ ಬಲಿಯಾಗಿ ನೀಡಿ ಅವನನ್ನು ಬೇಗ ಸ್ವರ್ಗಕ್ಕೆ ಕಳುಹಿಸಬಾರದೇಕೆ?'

	ಲೋಕಾಯತರು ಅನುಮಾನ ಪ್ರಮಾಣಗಳನ್ನು ಊಹಾತ್ಮಕ ಪ್ರಕಲ್ಪನೆಗಳನ್ನು ತರ್ಕಬದ್ಧವಾಗಿ ಸಾಮಾನ್ಯ ಜನರಿಗೂ ಅರ್ಥವಾಗುವಂಥ ಉದಾಹರಣೆಗಳನ್ನು ನೀಡುತ್ತ, ವಿರೋಧಿಸಿದರು. ಉದಾಹರಣೆಗೆ, ಸಂಪ್ರದಾಯಸ್ಥರು ಶ್ರಾದ್ಧ ಕರ್ಮ ನಡೆಸಿ ಪಿಂಡಪ್ರದಾನ ಮಾಡುತ್ತಿದ್ದರು. ಆ ಪಿಂಡವು ಸ್ವರ್ಗದಲ್ಲಿದ್ದ ತಮ್ಮ ಪೂರ್ವಜರಿಗೆ ತಲಪುತಿದ್ದಿತೆಂಬುದು ಅವರ ನಂಬಿಕೆಯಾಗಿದ್ದಿತು. ಇದರ ಮಿಥ್ಯತೆಯನ್ನು ಬಯಲು ಮಾಡುತ್ತ ಲೋಕಾಯತರು ಪ್ರಶ್ನಿಸಿದರು. ಹಾಗಾದರೆ ಪ್ರಯಾಣ ಹೊರಟವರಿಗೆ ಬುತ್ತಿಯ ಗಂಟನ್ನೇಕೆ ಕೊಡಬೇಕು? ಮಹಡಿ ಮೇಲಿರುವವರಿಗೆ ಕೆಳಗಿನಿಂದಲೇ ಆಹಾರ ನೀಡಬಾರದೇಕೆ? ಭೂಮಿಯಿಂದ ಸ್ವರ್ಗಕ್ಕೇ ಆಹಾರ ಹೋಗುವುದಾದರೆ, ಕೆಳಗಿನ ಮಹಡಿಯಿಂದ ಅದು ಮೇಲಿನ ಮಹಡಿಗೆ ಹೋಗಲಾಗದೆ?

	ಹೀಗೆ ಆ ಕಾಲದಲ್ಲಿ ಲೋಕಾಯತರ ಮತ್ತು ಸಂಪ್ರದಾಯಸ್ಥರ ನಡುವೆ ವಾದವಿವಾದಗಳು ಬಲುಬಿರುಸಿನಿಂದ ನಡೆಯುತ್ತಿದ್ದವು. ಸಂಪ್ರದಾಯಸ್ಥರು ಲೋಕಾಯತರನ್ನು ವಿತಂಡವಾದಿಗಳು, ವೇದನಿಂದಕರು ನಾಸ್ತಿಕರು ಎಂದು ಜರಿದು ಅವರನ್ನು ಬಹಿಷ್ಕಾರಕ್ಕೆ ಗುರಿಪಡಿಸಿದುದಲ್ಲದೆ ಅವರನ್ನು ಸುಟ್ಟು ಹಾಕಿದ ಪ್ರಸಂಗಗಳೂ ದಾಖಲಾಗಿವೆ. ಆದರೂ ಲೋಕಾಯತರ ಭೌತವಾದಿ ತರ್ಕಬದ್ಧ ವಿಚಾರಗಳು ಅಂದಿನ ಸಾಂಖ್ಯ, ನ್ಯಾಯ, ವೈಶೇಷಿಕ ಮತ್ತು ವೈದ್ಯಕೀಯ ಶಾಸ್ತ್ರೀಯ ಗ್ರಂಥಗಳಲ್ಲಿ ವಿಪುಲವಾಗಿ ಬಳಸಲ್ಪಟ್ಟಿರುವುದು ಅವುಗಳ ಅಂತಸ್ಸತ್ತ್ವ ಹಾಗೂ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.

	ಲೋಕಾಯತರ ಮತ್ತೊಂದು ವಿಶೇಷವೆಂದರೆ ಅವರು ಚಾತುರ್ವಣ್ರ್ಯ ಪದ್ಧತಿಯನ್ನು ಪ್ರಖರವಾಗಿ ವಿರೋಧಿಸಿದುದು. ಎಲ್ಲ ಮನುಷ್ಯರ ಶರೀರ, ಮುಖ, ಅಂಗಾಂಗಗಳೆಲ್ಲ ಒಂದೇ ರೀತಿಯಲ್ಲಿ ಇರುವಾಗ ವರ್ಣ ಹಾಗೂ ಜಾತಿ ಆಧಾರದ ಮೇಲೆ ಅವರ ನಡುವೆ ಭೇದ ಕಲ್ಪಿಸುವುದು ಎಷ್ಟು ಉಚಿತ ಎಂದವರು ವಾದಿಸಿದರು. ಅಂಥ ಭೇದ ಭಾವಗಳು ಅವೈಜ್ಞಾನಿಕವಷ್ಟೆ ಅಲ್ಲ ಅಸಮರ್ಥನೀಯವೂ ಹೌದೆಂದು ಅವರು ವಾದಿಸಿದರು.

	ಲೋಕಾಯತವು ಪ್ರಾಚೀನ ಭಾರತದ ಮೂಲ ಭೌತವಾದಿ ತತ್ತ್ವಜ್ಞಾನವೆಂದು ಒಪ್ಪಿಕೊಂಡರೂ ಅದು ಇನ್ನೂ ಪ್ರಾಕೃತ ರೂಪದಲ್ಲಿದ್ದಿತೆಂಬುದನ್ನು ಅಲ್ಲಗಳೆಯಲಾಗದು. ಅದರ ತಾರ್ಕಿಕ ವಿಶ್ಲೇಷಣೆ, ಅದು ತನ್ನ ವಾದಸಮರ್ಥನೆಗೆ ನೀಡುವ ಉದಾಹರಣೆ-ವಿವರಣೆಗಳು ತೀರ ಸಾಮಾನ್ಯ ಸ್ವರೂಪದ್ದಾಗಿ ಕಂಡುಬರುತ್ತವೆಂಬುದಂತೂ ನಿಜ. ಆದರೆ ಅದು ಕಾರ್ಯ-ಕಾರಣಕ್ಕೆ ಹಾಗೂ ಇಂದ್ರಿಯಾಧಾರಿತ ಪ್ರತ್ಯಕ್ಷ ಪ್ರಮಾಣಕ್ಕೆ ಆದ್ಯತೆ ನೀಡಿದ್ದಿತೆಂಬುದನ್ನಂತೂ ನಿರಾಕರಿಸಲಾಗದು.

	ಅದರ ಮೂಲ ವಿಚಾರಗಳನ್ನು ಸೂಕ್ಷ್ಮವಾಗಿ ಮತ್ತೊಮ್ಮೆ ಹೇಳಬಹುದಾದರೆ-
	ಕೃಷಿ, ಪಶುಪಾಲನೆ, ವ್ಯಾಪಾರ, ರಾಜ್ಯಸೇವಾಕಾರ್ಯಗಳು ಬುದ್ಧಿವಂತರ ವೃತ್ತಿಗಳು. ದೇಹಕ್ಕೆ ಬೂದಿ ಬಳಿದುಕೊಂಡು ಅಗ್ನಿಹೋತ್ರ ಮತ್ತಿತರ ಧಾರ್ಮಿಕ ಕ್ರಿಯೆಗಳನ್ನು ನಡೆಸುವವರು ಬುದ್ಧಿಹೀನರು, ಮಾನವತಾಶೂನ್ಯರು.
	ಮನುಷ್ಯರು ಸಾರ್ವಜನಿಕವಾಗಿ ಉಪಯುಕ್ತವಾದ, ಪ್ರಾಯೋಗಿಕ ತಿಳಿವಳಿಕೆಯ ಮೇಲೆ ಆಧರಿತವಾದ ವೃತ್ತಿಗಳನ್ನು ಅನುಸರಿಸಬೇಕು. ಅವರು ಸುಖಸಂತೋಷಗಳ ಹಾಗೂ ತಮ್ಮ ವಿವೇಕಯುತ ಆವಶ್ಯಕತೆಗಳನ್ನು ಪೂರೈಸುವಂಥ ನೆಮ್ಮದಿಯ ಬಾಳು ಬಾಳಬೇಕು.
	ಧರ್ಮಶಾಸ್ತ್ರಗಳು ಅಸಂಗತವಾದವು, ಹಾನಿಕರವಾದವು. ಅವನ್ನು ಶ್ರೀಮಂತರು ಬಡಜನರ ಶೋಷಣೆಗಾಗಿ ನಿರ್ಮಿಸಿ ಬಳಸಿಕೊಳ್ಳುತ್ತಿದ್ದಾರೆ.
	ನಿಜವಾದ ದಾಸ್ಯ ಇರುವುದು ಗುಲಾಮಗಿರಿಯಲ್ಲಿ. ನಿಜವಾದ ಮೋಕ್ಷ ಇರುವುದು ಸ್ವಾತಂತ್ರ್ಯದಲ್ಲಿ.
	ಸಾವಿನ ನಂತರ ಮೋಕ್ಷ ಅನ್ನುವಂತಹುದು ಯಾವುದೂ ಇಲ್ಲ. ಸಾವೇ ಬಾಳಿನ ಕೊನೆ.
	ಪುನರ್‍ಜನ್ಮವಿಲ್ಲ. ಪರಲೋಕ ಎಂಬುದಿಲ್ಲ. ಇಂದಿನ ಜನ್ಮವಷ್ಟೆ ವಾಸ್ತವಿಕ, ಸರ್ವಸ್ವ. ಅದನ್ನು ಸುಖಸಂತೋಷಗಳಿಂದ ಕೂಡಿರುವಂತೆ ಬಾಳಬೇಕು.
	ಸ್ವರ್ಗ ಎಂಬುದೂ ಇಲ್ಲ, ನರಕ ಎಂಬುದೂ ಇಲ್ಲ. ಕರ್ಮಫಲ ಎನ್ನುವಂತಹುದೂ ಇಲ್ಲ. ದೇವರು ಇಲ್ಲ. ಶ್ರೀಮಂತರು ಬಡವರನ್ನು ಮೋಸಗೊಳಿಸಲು, ಶೋಷಿಸಲು, ದೈವಸ್ಪಷ್ಟನೆ ಮಾಡಿದ್ದಾರೆ. ಆದ್ದರಿಂದ ಧರ್ಮ ಹಾಗೂ ಮೋಕ್ಷಗಳು ಮಾನವ ವ್ಯಕ್ತಿಗಳ ಜೀವನ ಧ್ಯೇಯಗಳಾಗಲಾರವು.
	ಧರ್ಮ, ಜಾತಿ, ಮತಗಳು ಕುಟಿಲ ಜನರ ಪಿತೂರಿ. ಅವನ್ನು ನಿರ್ಮಿಸಿದವರು ಭಂಡರು, ಧೂರ್ತರು, ನಿಶಾಚರರು. ಅವಕ್ಕೆ ಬಲಿಯಾಗುವವರು ಮೂರ್ಖರು.

	ಹೀಗೆ ಲೋಕಾಯತ ವಿಚಾರಧಾರೆಯು ಧಾರ್ಮಿಕ ಪ್ರಕಲ್ಪನೆಗಳ ಇಡೀ ಪದ್ಧತಿಯನ್ನು ವಿರೋಧಿಸಿತು; ಮರಣಾನಂತರ ಜೀವನದ ಅಸ್ತಿತ್ವವನ್ನೂ, ಆತ್ಮವನ್ನೂ, ಆತ್ಮದ ಮರುಹುಟ್ಟನ್ನೂ ತಿರಸ್ಕರಿಸಿತು. ಅದೇ ಹೊತ್ತಿನಲ್ಲಿ ಅದು ಕರ್ಮಸಿದ್ಧಾಂತವನ್ನೂ ವರ್ಣವಿಭಜನೆಯ ಸಾಮಾಜಿಕವ್ಯವಸ್ಥೆಯನ್ನು ಪ್ರಬಲವಾಗಿ ವಿರೋಧಿಸಿತು. ಇದೇ ಅದರ ಹಿರಿಮೆ ಎನ್ನಬಹುದು.

(ಕೆ.ಎಲ್.ಗೋಪಾಲಕೃಷ್ಣರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ